ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿರುವ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಯ ಗೋಡೆಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಿ, ಜನರ ಗಮನ ಸೆಳೆಯುವುದರೊಂದಿಗೆ ಸ್ವಚ್ಛತಾ ಜಾಗೃತಿ ಮೂಡಿಸುವಲ್ಲಿ ಹುಬ್ಬಳ್ಳಿಯ ‘ರೆವಲ್ಯೂಷನ್ ಮೈಂಡ್ಸ್’ ಎಂಬ ಉತ್ಸಾಹಿ ಯುವಕರ ತಂಡ ನಿರತವಾಗಿದೆ.
ಎಂಜಿನಿಯರ್ ವಿದ್ಯಾರ್ಥಿಯಾಗಿರುವ ವಿನಾಯಕ ಜೋಗಾರಶೆಟ್ಟರ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಯುವಕ- ಯುವತಿಯರು ಈ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಹೊಸ ಬಸ್ ನಿಲ್ದಾಣ, ಗೋಕುಲ ರಸ್ತೆ, ಕೇಶ್ವಾಪುರ, ಕೋಟಿಲಿಂಗೇಶ್ವರ ನಗರ, ನವನಗರದ ಸ್ಕೈಪಾತ್, ಪ್ರಶಾಂತ ಕಾಲೋನಿ, ಗದಗ ರಸ್ತೆ, ಕಿಮ್ಸ್ ಆಸ್ಪತ್ರೆ ಆವರಣ, ಹೊಸೂರ ಟರ್ಮಿನಲ್ ಸೇರಿದಂತೆ ಅನೇಕ ಕಡೆ ಗೋಡೆಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಿ, ಜಾಗೃತಿಯೊಂದಿಗೆ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡುತಿದ್ದಾರೆ.
ವಾರಾಂತ್ಯದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸುಂದರವಾಗಿಸುವ ಈ ತಂಡ, ಸರ್ಕಾರಿ ಶಾಲೆ ಗೋಡೆಗಳನ್ನು ಅಂದವಾಗಿಸುತ್ತಿವೆ. ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ‘ಮೈ ಸಿಟಿ, ಮೈ ಡ್ಯೂಟಿ’ ಎಂಬ ಘೋಷವಾಕ್ಯದಡಿ ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯ ಆವರಣದ ಗೋಡೆಗಳನ್ನು ಸುಂದರಗೊಳಿಸುತ್ತಿದ್ದಾರೆ. ಗೋಡೆ ಮೇಲೆ ನಮ್ಮ ದೇಶದ ಕಲೆ, ಸಂಸ್ಕೃತಿ, ಮಕ್ಕಳನ್ನು ಸೆಳೆಯುವ ಕಾರ್ಟೂನ್‍ಗಳ ಮೂಲಕ ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಹಾಗೂ ಟ್ರಾಫಿಕ್ ಸಿಗ್ನಲ್‍ಗಳನ್ನು ಪಾಲಿಸುವ ಸಂದೇಶವುಳ್ಳ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.
‘ಅವಳಿ ನಗರದಲ್ಲಿ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಂಡ ಕಂಡಲ್ಲಿ ಜನ ಗುಟ್ಕಾ, ಎಲೆ-ಅಡಿಕೆ ಜಗಿದು ಉಗುಳುತ್ತಾರೆ. ಇದರಿಂದ ನಗರವೆಲ್ಲಾ ಗಲೀಜಾಗಿ ಕಾಣುತ್ತಿದೆ. ಬದಲಾಗಿ ಎನ್ನುವ ಬದಲು, ನಾವೇ ಬದಲಾವಣೆ ಆರಂಭಿಸುವುದು ಉತ್ತಮ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ’ ಎನ್ನುತ್ತಾರೆ ರೆವಲ್ಯೂಷನ್ ಮೈಂಡ್ಸ್ ತಂಡದ ಸ್ಥಾಪಕ ವಿನಾಯಕ ಜೋಗಾರ ಶೆಟ್ಟರ್.
ನ್ನು ಕೇವಲ ಗೋಡೆಗಳಿಗೆ ಬಣ್ಣ ಬಳಿಯುವುದಷ್ಟೆ ಅಲ್ಲದೇ ಅನಾಥಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಈ ಯುವಕರ ತಂಡ ಪ್ರಸ್ತುತ ಯುವಜನಾಂಗಕ್ಕೆ ಮಾದರಿಯಾಗಿದೆ. ರೆವಲ್ಯೂಷನ್ ಮೈಂಡ್ಸ್ ತಂಡದ ಸಾಮಾಜಿಕ ಕಾರ್ಯ ಮೆಚ್ಚಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ‘ಧೀಮಂತ ಪ್ರಶಸ್ತಿ’ ನೀಡಿ ಗೌರವಿಸಿದೆ.